ಆತ್ಮೀಯ ಸ್ಪಧಾ೯ಮಿತ್ರರಿಗೆ ಕನ್ನಡದಲ್ಲಿ ಸಂಪೂಣ೯ ಉದ್ಯೋಗದ ಉಪಯುಕ್ತ ಮಾಹಿತಿ 

ಕರ್ನಾಟಕದ ಕಲೆ ಮತ್ತು ವಾಸ್ತು ಶಿಲ್ಪದ ಇತಿಹಾಸ

ಕರ್ನಾಟಕದ ಕಲೆ ಮತ್ತು ವಾಸ್ತುಶಿಲ್ಪದ ಸಂಪೂರ್ಣ ಇತಿಹಾಸ

ಕರ್ನಾಟಕದ ಕಲೆ ಮತ್ತು ವಾಸ್ತು ಶಿಲ್ಪದ ಇತಿಹಾಸವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಪಟ್ಟಂತೆ ಕಲೆ ಮತ್ತು ಸಂಸ್ಕೃತಿ ವಿಭಾಗದಲ್ಲಿ ಸಾಕಷ್ಟು ಪ್ರಶ್ನೆಗಳನ್ನು ಕೇಳಲಾಗುತ್ತದೆ ಈ ನಿಟ್ಟಿನಲ್ಲಿ ಕರ್ನಾಟಕದ ವಿವಿಧ ರಾಜ ಮನೆತನಗಳ ವಾಸ್ತು ಶಿಲ್ಪ ಯಾವ ರೀತಿಯಾಗಿತ್ತು ಎಂಬುದನ್ನ ಈ ಕೆಳಗಿನಂತೆ ನೀಡಲಾಗಿದೆ. ಕಲೆ ಮತ್ತು ಸಂಸ್ಕೃತಿಯಲ್ಲಿ ಬರುವ ಕೆಲವೊಂದು ಪದಗಳಿಗೆ ಅರ್ಥ ವಿವರಣೆಯನ್ನು ಕೂಡ ನೀಡಲಾಗಿದೆ. 


ಕರ್ನಾಟಕದ ಕಲೆ ಮತ್ತು ವಾಸ್ತು ಶಿಲ್ಪದ ಇತಿಹಾಸ, History of Art and Architecture of Karnataka
History of Art and Architecture of Karnataka


ಕದಂಬರ ಕಲೆ ಮತ್ತು ವಾಸ್ತುಶಿಲ್ಪ  

ಕರ್ನಾಟಕದ ಮೊದಲ ರಾಜ ಮನೆತನ ಕದಂಬ ರಾಜ ಮನೆತನ. ಕದಂಬರು ವೈದಿಕ ಧರ್ಮದವರು ಹಾಗೂ ಬೌದ್ಧ ಧರ್ಮವನ್ನು ಸಹ ಪೋಷಿಸಿದರು. ಬನವಾಸಿಗೆ ಭೇಟಿ ನೀಡಿದ ಚೀನಾದ ಯಾತ್ರಿಕ ಹ್ಯೂಯೆನ್ ತ್ಸಾಂಗ್ ಬೌದ್ಧ ಧರ್ಮದ ಪೋಷಣೆಯನ್ನು ವಿವರಿಸಿದ್ದಾರೆ. 

ಸಾಹಿತ್ಯ 

ಕದಂಬರ ಕಾಲದಲ್ಲಿ ಕನ್ನಡ, ಪ್ರಾಕೃತ, ಮತ್ತು ಸಂಸ್ಕೃತ ಭಾಷೆಗಳು ಬಳಕೆಯಲ್ಲಿ ಇದ್ದವು ಮಯೂರವರ್ಮನ ಚಂದ್ರವಳ್ಳಿ ಶಾಸನ ಇದು ಪ್ರಾಕೃತ ಭಾಷೆಯಲ್ಲಿದೆ. ಶಾಂತಿವರ್ಮನು ಕವಿ ಕಲ್ಪಕುಬ್ಜ ನಿಂದ ತಾಳಗುಂದ ಶಾಸನ ಹೊರಡಿಸಿದ. 450 ರಲ್ಲಿ ಕಾಕುತ್ಸವರ್ಮನಿಂದ ಹಲ್ಮಿಡಿ ಶಾಸನವನ್ನು ಹೊರಡಿಸಲಾಗುತ್ತದೆ. ಇದು ಹಾಸನ್ ಜಿಲ್ಲೆಯ ಬೇಲೂರು ತಾಲೂಕಿನ ಹಲ್ಮಿಡಿ ಎಂಬ ಊರಲ್ಲಿ ಇದೆ. ಇದು ಕನ್ನಡದ ಮೊದಲ ಶಾಸನವಾಗಿದ್ದು ಎಚ್ ಎಂ ಕೃಷ್ಣ ಇದನ್ನ ಸಂಗ್ರಹಿಸಿದವರು. 

ಕಲೆ ಮತ್ತು ವಾಸ್ತುಶಿಲ್ಪ 

ಕದಂಬರು ಕದಂಬ ಎಂಬ ಮೊದಲ ಶೈಲಿಯ ವಾಸ್ತು ಶಿಲ್ಪವನ್ನು ಸೃಷ್ಟಿಸಿದರು. ಚತುಷ್ಕೋಣಕಾರದ ದೇವಾಲಯಗಳು, ಸ್ತಂಭಗಳಿಂದ ಕೂಡಿದ ಸಭಾಂಗಣ, ಗರ್ಭಗುಡಿ ಮತ್ತು ಸುಖನಾಸಿಯನ್ನು  ಪ್ರತ್ಯೇಕಿಸುವುದು ಇವರ ವಿಶಿಷ್ಟ ಲಕ್ಷಣ. 
ಪ್ರಮುಖ ದೇವಾಲಯಗಳು : ಹಲಸಿಯ ಕಲ್ಲೇಶ್ವರ ದೇವಾಲಯ, ತಾಳಗುಂದದ ಪ್ರಣವೇಶ್ವರ ದೇವಾಲಯ, ಬನವಾಸಿಯಲ್ಲಿ ಮಧುಕೇಶ್ವರ ಮತ್ತು ವರಾಹ ನರಸಿಂಹ ದೇವಾಲಯಗಳು ಪ್ರಮುಖವಾಗಿವೆ. 

ಗಂಗರ ಕಲೆ ಮತ್ತು ವಾಸ್ತು ಶಿಲ್ಪ 

ಕರ್ನಾಟಕವನ್ನು ಅತಿ ಹೆಚ್ಚು ಕಾಲ ಆಳಿದ ರಾಜಮನೆತನ ಗಂಗರ ರಾಜ ಮನೆತನವಾಗಿದೆ. ಇವರು ಕರ್ನಾಟಕವನ್ನು 600 ವರ್ಷಗಳ ತನಕ ಆಳುತ್ತಾರೆ. ಇವರನ್ನು ತಲಕಾಡಿನ ಗಂಗರು ಎಂದು ಕರೆಯುತ್ತಾರೆ. ಇವರ ಆರಂಭಿಕ ರಾಜಧಾನಿ ಕೋಲಾರ ಇದನ್ನು ಈ ಹಿಂದೆ ಕುವಲಾಲ ಎಂದು ಕರೆಯಲಾಗುತ್ತಿತ್ತು.
ಗಂಗರು ವೈದಿಕ, ಜೈನ ಮತ್ತು ಬೌದ್ಧ ಪಂಥಗಳನ್ನು ಸಮನಾಗಿ ಪೋಷಿಸಿದವರು. ಗಂಗರಲ್ಲಿ ಪ್ರಸಿದ್ಧನಾದ ಚಾವುಂಡರಾಯ ಜೈನನಾಗಿದ್ದು ಜೈನರ ಕಾಶಿಯೆಂದೆ ಹೆಸರಾದ ಶ್ರವಣಬೆಳಗೊಳವು ಅಂದಿನ ಪ್ರಸಿದ್ಧ ಜೈನ ಯಾತ್ರಾಸ್ಥಳ

ಸಾಹಿತ್ಯ 

ಗಜಷ್ಟಕ ಕೃತಿ : ಎರಡನೇ ಶಿವಮಾರ ಬರೆದರು ಇದು ಕನ್ನಡದಲ್ಲಿ ಇದೆ.
ಗಜ ಶಾಸ್ತ್ರ ಕೃತಿ : ಶ್ರೀ ಪುರುಷ ಬರೆದರು
ವಡ್ಡಕತಾ : ಗುಣಾಡ್ಯ 
ಚಾವುಂಡರಾಯ : ಚಾವುಂಡರಾಯ ಪುರಾಣ, ಚರಿತ್ರಸಾರ
ನೇಮಿಚಂದ್ರ : ತ್ರಿಲೋಕಸಾರ, ದ್ರವ್ಯಸಾರಸಂಗ್ರಹ
ದುರ್ವಿನೀತ : ಗುಣಾಡ್ಯನ ಬೃಹತ್ ವಡ್ಡಕತಾ ಪೈಸಾಚಿಯಿಂದ ಸಂಸ್ಕೃತಕ್ಕೆ ಅನುವಾದ ಮಾಡಿದರು.

ಕಲೆ ಮತ್ತು ವಾಸ್ತು ಶಿಲ್ಪ 

ಪ್ರಮುಖವಾಗಿ ಗಂಗರ ವಾಸ್ತು ಶಿಲ್ಪವು ಕದಂಬರ ಮತ್ತು ಪಲ್ಲವರ ಕಲೆಯ ಮಿಶ್ರಣವಾಗಿದೆ. ಕಂಬಗಳ ಕೆಳಗೆ ಸಿಂಹಗಳ ಕೆತ್ತನೆ, ಚೌಕಾಕಾರದ ಕಂಬಗಳ ಕೆತ್ತನೆ ಮುಖ್ಯ ಲಕ್ಷಣಗಳಾಗಿವೆ. 
ಮಾನ್ಯ ಪುರದ ಕಪಿಲೇಶ್ವರ ದೇವಾಲಯ, ಆರ್ಕೇಶ್ವರ ದೇವಾಲಯ, ಸೋಮೇಶ್ವರ, ಪಾತಾಳೇಶ್ವರ ದೇವಾಲಯಗಳು ಪ್ರಮುಖವಾಗಿವೆ.
ಜೈನ ಧರ್ಮಕ್ಕೆ ಸಂಬಂಧಿಸಿದಂತೆ ಶ್ರವಣಬೆಳಗೊಳದ ಚಂದ್ರಗಿರಿ ಬೆಟ್ಟದಲ್ಲಿ 14 ಜೈನ ಬಸದಿಗಳನ್ನು ಕಾಣಬಹುದು. 
ಬೇಗೂರು ವೀರಗಲ್ಲು ಗಂಗರಿಗೆ ಸಂಬಂಧಿಸಿದಾಗಿದೆ ಇದು ಬೆಂಗಳೂರು ಮ್ಯೂಸಿಯಂನಲ್ಲಿ ಇದೆ. 


ಭಾರತದ ವಿಶ್ವ ಪಾರಂಪರಿಕ ತಾಣಗಳು ಮಾಹಿತಿ : 👉  ಕ್ಲಿಕ್‌ ಮಾಡಿ


ಬಾದಾಮಿ ಚಾಲುಕ್ಯರು 

ಬಾದಾಮಿ ಚಾಲುಕ್ಯರು ಇಂದಿನ ಬಾಗಲಕೋಟೆ ಜಿಲ್ಲೆಯ ಬಾದಾಮಿ ರಾಜಧಾನಿಯನ್ನಾಗಿ ಮಾಡಿಕೊಂಡು ಇಡೀ ಭಾರತವನ್ನು ಆಳಿದ ರಾಜಮನೆತನವಾಗಿದೆ. ಕರ್ನಾಟಕದ ಇತಿಹಾಸದಲ್ಲಿ ಅಷ್ಟೇ ಅಲ್ಲದೆ ಇಡೀ ಭಾರತದ ಇತಿಹಾಸದಲ್ಲಿ ಬಾದಾಮಿ ಚಾಲುಕ್ಯರು ತಮ್ಮದೇ ಗುರುತು ನೀಡಿದ್ದಾರೆ. 
ಬಾದಾಮಿ ಚಾಲುಕ್ಯರು ವೈಷ್ಣವರು ಇವರು ಶೈವ, ಜೈನ, ಮತ್ತು ಬೌದ್ಧ ಪಂಥಗಳ ಪೋಷಕರಾಗಿದ್ದರು. ಬಾದಾಮಿಯಲ್ಲಿ ಇರುವ 1, 2, ಮತ್ತು 3ನೇ ಗುಹೆಗಳು ವೈದಿಕ ಸಂಪ್ರದಾಯಕ್ಕೆ ಸಂಬಂಧಿಸಿವೆ ಮತ್ತು ಐಹೊಳೆಯಲ್ಲಿ ಎರಡು ಅಂತಸ್ತಿನ ಬೌದ್ಧ ಗುಹಾಲಯವಿದೆ. ಜೈನ ಧರ್ಮವು ಪೋಷಣೆಯಲ್ಲಿ ಇತ್ತು ಎಂಬುದಕ್ಕೆ ಇಮ್ಮಡಿ ಪುಲಕೇಶಿಯ ಆಸ್ಥಾನದ ಕವಿ ರವಿಕೀರ್ತಿ ಸ್ವತಃ ಜೈನನಾಗಿದ್ದು ಐಹೊಳೆಯಲ್ಲಿ ಜಿನಾಲಯವನ್ನು ಸ್ಥಾಪಿಸಿದನು. 

ಸಾಹಿತ್ಯ

ಒಂದನೇ ಕೀರ್ತಿವರ್ಮನ ಸಾಧನೆಗಳನ್ನು ತಿಳಿಸುವ ಮಹಾಕೂಟ ಸ್ತಂಭ ಶಾಸನ ಸಂಸ್ಕೃತದಲ್ಲಿ ಇದೆ.
ಇಮ್ಮಡಿ ಪುಲಕೇಶಿಗೆ ಸಂಬಂಧಿಸಿದ ಐಹೊಳೆ ಶಾಸನವು ಸಂಸ್ಕೃತದಲ್ಲಿ ಇದೆ. ಇದರಲ್ಲಿ ಪುಲಕೇಶಿಯ ಸಾಧನೆಗಳನ್ನು ಕವಿ ರವಿಕೀರ್ತಿ ಕೆತ್ತಿಸಿದ್ದಾರೆ. ಪೂಜ್ಯಪಾದರು ಶಬ್ದಾವತಾರ ಎಂಬ ವ್ಯಾಕರಣದ ಕೃತಿಯನ್ನು ರಚಿಸಿದ್ದಾರೆ. 

ಕಲೆ ಮತ್ತು ವಾಸ್ತು ಶಿಲ್ಪ

ಚಾಲುಕ್ಯರ ವಾಸ್ತುಶಿಲ್ಪದ ಶೈಲಿಯನ್ನು ವೇಸರ ಶೈಲಿ ಎಂದು ಕರೆಯಲಾಗುತ್ತದೆ.  ಮುಖ್ಯವಾಗಿ ವೇಸರ ಶೈಲಿಯೂ ಉತ್ತರದ ನಾಗರ ಮತ್ತು ದಕ್ಷಿಣದ ದ್ರಾವಿಡ ಶೈಲಿಗಳ ಮಿಶ್ರಣವಾಗಿದೆ. ಇವರನ್ನು ಮುಖ್ಯವಾಗಿ ಕರ್ನಾಟಕದ ದೇವಾಲಯದ ವಾಸ್ತುಶಿಲ್ಪದ ಪ್ರವರ್ತಕರು ಎಂದು ಕರೆಯುತ್ತಾರೆ. ಪ್ರಮುಖವಾಗಿ ಗುಹಾಂತರ ದೇವಾಲಯದ ಮಾದರಿಯನ್ನು ನಾವು ಬೌದ್ಧ ಧರ್ಮದಲ್ಲಿ ಕಾಣುತ್ತೇವೆ ಆದರೆ ಅದನ್ನ ಹಿಂದೂ ದೇವರುಗಳಿಗೆ ಅಳವಡಿಸಿಕೊಂಡವರಲ್ಲಿ ಬಾದಾಮಿ ಚಾಲುಕ್ಯರು ಮೊದಲಿಗರು. ದೇವಾಲಯಗಳಲ್ಲಿ ಚೌಕಾಕಾರದ ಗರ್ಭಗೃಹ, ಸಭಾ ಮಂಟಪ ಮತ್ತು ಮುಖ ಮಂಟಪಗಳನ್ನು ಕಾಣಬಹುದು. ಯಾವ ದೇವಾಲಯಗಳಲ್ಲಿ ಪ್ರದಕ್ಷಿಣಾಪಥ ಇಲ್ಲದಿರುವುದಿಲ್ಲವೋ ಅವುಗಳನ್ನ ನಿರಂಧರಾ ದೇವಾಲಯಗಳು ಎಂದು ಕರೆಯುತ್ತಾರೆ. ಪ್ರದಕ್ಷಿಣಪಥ ಒಳಗೊಂಡಿರುವ ದೇವಾಲಯಗಳಲ್ಲಿ ಐಹೊಳೆಯಲ್ಲಿರುವ ಹುಚ್ಚಮಲ್ಲಿ, ಪಟ್ಟದ ಕಲ್ಲಿನಲ್ಲಿರುವ ಸಂಗಮೇಶ್ವರ, ಮಹಾಕೂಟದ ಮಲ್ಲಿಕಾರ್ಜುನ ದೇವಾಲಯಗಳು ಸಾಕ್ಷಿಗಳಾಗಿವೆ.

ಚಾಲುಕ್ಯರ ವಾಸ್ತುಶಿಲ್ಪದ ನಗರಗಳು 

ಐಹೊಳೆ 


ಐಹೊಳೆಯನ್ನು ಭಾರತದ ವಾಸ್ತುಶಿಲ್ಪದ ತೊಟ್ಟಿಲು ಎಂದು ಕರೆಯಲಾಗುತ್ತದೆ. ಐಹೊಳೆಯೂ ಬಾದಾಮಿ ಚಾಲುಕ್ಯ ರಾಜಮನೆತನದ ಪ್ರಥಮ ರಾಜಧಾನಿಯಾಗಿತ್ತು. ಐಹೊಳೆಯಲ್ಲಿ ಸುಮಾರು 70ಕ್ಕೂ ಅಧಿಕ ದೇವಾಲಯಗಳು ಇವೆ. 

ದುರ್ಗಾ ದೇವಾಲಯ : ಇದು ಮೂಲತಃ ಸೂರ್ಯ ದೇವಾಲಯವಾಗಿದೆ. 
ಹುಚ್ಚಮಲ್ಲಿ ದೇವಾಲಯ : ಇದು ದಕ್ಷಿಣ ಭಾರತದ ನಾಗರ ಶೈಲಿಯ ಪ್ರಥಮ ದೇವಾಲಯವಾಗಿದೆ. 
ಮಹಾಕೂಟ ದೇವಾಲಯಗಳನ್ನು ಮಂಗಳೇಶನು ತನ್ನ ವಿಜಯದ ನೆನಪಿಗೆ ನಿರ್ಮಿಸಿದ ಇವು ಕರ್ನಾಟಕದ ಪ್ರಪ್ರಥಮ ದಕ್ಷಿಣ ಶೈಲಿಯ ಶಿಖರವನ್ನು ಹೊಂದಿರುವ ದೇವಾಲಯಗಳಾಗಿವೆ.

ಪಟ್ಟದಕಲ್ಲು 

ಯುನೆಸ್ಕೊ 1987ರಲ್ಲಿ ಈ ಸ್ಮಾರಕಗಳನ್ನು ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸಲಾಗಿದೆ. ಮುಖ್ಯವಾಗಿ ಇಲ್ಲಿ ಉತ್ತರದ ನಾಗರ ಶೈಲಿ ದಕ್ಷಿಣದ ದ್ರಾವಿಡ ಶೈಲಿ ಮತ್ತು ಬಾದಾಮಿ ಚಾಲುಕ್ಯರ ವೇಸರ ಶೈಲಿ ಕಾಣಬಹುದು. ಇನ್ನು ವಿರೂಪಾಕ್ಷ ದೇವಾಲಯವನ್ನು ಎರಡನೇ ವಿಕ್ರಮಾದಿತ್ಯನ ಹಿರಿಯ ರಾಣಿ ಪಲ್ಲವರ ಮೇಲೆ ವಿಜಯ ಸಾಧಿಸಿದ ನೆನಪಿಗೆ ಕಟ್ಟಿಸಿದಳು. 
 

ರಾಷ್ಟ್ರಕೂಟರು

ರಾಷ್ಟ್ರಕೂಟರ ವಂಶದ ಸ್ಥಾಪಕ ದಂತಿದುರ್ಗ ಇವನಿಗೆ ರಾಜ ಪರಮೇಶ್ವರ ಪೃಥ್ವಿ ವಲ್ಲಭ ಎಂಬ ಬಿರುದುಗಳು ಇದ್ದವು. ರಾಷ್ಟ್ರಕೂಟರ ಒಂದನೇ ಕೃಷ್ಣ ಕಲೆ ಮತ್ತು ವಾಸ್ತು ಶಿಲ್ಪಕ್ಕೆ ಹೆಸರುವಾಸಿಯಾದ ವಿಶ್ವ ವಿಖ್ಯಾತವಾದ ಎಲ್ಲೋರಾದ ಕೈಲಾಸನಾಥ ಗುಹಾಲಯವನ್ನು ನಿರ್ಮಿಸಿದನು. 
ರಾಷ್ಟ್ರಕೂಟರಲ್ಲಿ ಅತಿ ಪ್ರಸಿದ್ಧವಾದ ದೊರೆಯೆಂದರೆ ಅಮೋಘವರ್ಷ ನೃಪತುಂಗ ಇವನ ಆಸ್ಥಾನದ ಕವಿ ಶ್ರೀ ವಿಜಯನು ಹಳಗನ್ನಡದಲ್ಲಿ ಕವಿರಾಜ ಮಾರ್ಗ ಎಂಬ ಕೃತಿಯನ್ನು ರಚಿಸಿದನು ಇದು ಕನ್ನಡದ ಪ್ರಥಮ ಉಪಲಬ್ಧ ಕೃತಿಯಾಗಿದೆ. ಅಮೋಘವರ್ಷ ನೃಪತುಂಗ ಆಸ್ಥಾನಕ್ಕೆ ಭೇಟಿ ನೀಡಿದ ಅರಬ್ ಪ್ರವಾಸಿಗ ಸುಲೈಮಾನ್ 

ರಾಷ್ಟ್ರಕೂಟರದು ವೈದಿಕ ಧರ್ಮವಾಗಿತ್ತು. ರಾಷ್ಟ್ರಕೂಟರ ಕಾಲದಲ್ಲಿ ವೈಷ್ಣವ ಮತ್ತು ಶೈವ ಪಂಥಗಳು ಅಸ್ತಿತ್ವದಲ್ಲಿ ಇದ್ದವು. ಅವರ ಬಹುತೇಕ ಶಾಸನಗಳು ವಿಷ್ಣು ಸ್ತುತಿಯಿಂದ ಆರಂಭವಾಗುತ್ತವೆ. ರಾಷ್ಟ್ರಕೂಟರ ಲಾಂಛನ ವಿಷ್ಣುವಿನ ವಾಹನ ಗರುಡ. 

ಸಾಹಿತ್ಯ

  • ಶ್ರೀ ವಿಜಯನ : ಕವಿರಾಜಮಾರ್ಗ ಅತಿ ಪ್ರಮುಖವಾಗಿದೆ
  • ಶಿವಕೋಟ್ಯಾಚಾರ್ಯ : ವಡ್ಡಾರಾಧನೆ ಇದು ಕನ್ನಡದ ಮೊದಲ ಗದ್ಯ ಕೃತಿಯಾಗಿದೆ 
  • ಪೊನ್ನ : ಉಭಯಕವಿ ಚಕ್ರವರ್ತಿ 

ಕಲೆ ಮತ್ತು ವಾಸ್ತುಶಿಲ್ಪ 

ರಾಷ್ಟ್ರಕೂಟರ ಕಲೆ ಮತ್ತು ವಾಸ್ತುಶಿಲ್ಪವು ಜಗತ್ಪ್ರಸಿದ್ದವಾಗಿದೆ. ಎಲ್ಲೋರ ಮತ್ತು ಎಲಿಫೆಂಟಾ ಗುಹಾಂತರ ದೇವಾಲಯಗಳನ್ನು ಕಾಣಬಹುದು. ಎಲ್ಲೋರಾದಲ್ಲಿ ಒಂದನೇ ಕೃಷ್ಣನು ಬೃಹತ್ ಬಂಡೆಯನ್ನು ಕೊರೆದು ಕೈಲಾಸನಾಥ ದೇವಾಲಯವನ್ನು ನಿರ್ಮಿಸಿದನು. ಮತ್ತು ಎಲಿಫೆಂಟಾದಲ್ಲಿ ತ್ರಿಮೂರ್ತಿಗಳ ದೇವಾಲಯವನ್ನು ಕಾಣಬಹುದು.

ಕಲ್ಯಾಣಿ ಚಾಲುಕ್ಯರು

ಎರಡನೇ ತೈಲಪನು ಕಲ್ಯಾಣಿ ಚಾಲುಕ್ಯರ ವಂಶದ ಸ್ಥಾಪಕ. ಇವನು ಬಾದಾಮಿ ಚಾಲುಕ್ಯರ ನಾಲ್ಕನೇ ವಿಕ್ರಮಾದಿತ್ಯನ ಮಗ. ರಾಷ್ಟ್ರಕೂಟರ ನಂತರ ಕಲ್ಯಾಣಿ ಚಾಲುಕ್ಯರು ಪ್ರವರ್ಧಮಾನಕ್ಕೆ ಬಂದರು. ಕಲ್ಯಾಣಿ ಚಾಲುಕ್ಯರಲ್ಲಿ ಪ್ರಸಿದ್ಧನಾದ ದೊರೆ ಇರಿವಬೆಡಂಗ ಸತ್ಯಾಶ್ರಯ ಇವನ ಆಸ್ಥಾನದಲ್ಲಿದ್ದ ಕನ್ನಡದ ಕವಿ ರನ್ನ ಇವನು ಸತ್ಯಾಶ್ರಯನನ್ನು ಮಹಾಭಾರತದ ಭೀಮಸೇನನಿಗೆ ಹೋಲಿಸಿದ್ದಾನೆ.

ಸಾಹಿತ್ಯ 

  • ಕಾಶ್ಮೀರದ ಕವಿ ಬಿಲ್ಹನ : ವಿಕ್ರಮಾಂಕ ದೇವ ಚರಿತೆ ಇವನ ಗುರು ವಿಜ್ಞಾನೇಶ್ವರರು ಮಿತಾಕ್ಷರ ಸಂಹಿತೆಯನ್ನು ಬರೆದರು.
  • ಕೀರ್ತಿವರ್ಮ ಕನ್ನಡದ ಮೊದಲ ಪಶು ವೈದ್ಯ ಕೃತಿ ಗೋವೈದ್ಯವನ್ನು ಬರೆದರು. 
  • ರನ್ನ : ಅಜಿತಪುರಾಣ, ಸಾಹಸಭೀಮ ವಿಜಯ
  • ಒಂದನೇ ನಾಗವರ್ಮ : ಕರ್ನಾಟಕ ಕಾದಂಬರಿ, ಛಂದೊಬುದಿ
  • ದುರ್ಗಸಿಂಹನ : ಪಂಚತಂತ್ರ ಕೃತಿಗಳು
  • ಎರಡನೇ ನಾಗವರ್ಮನ : ಕಾವ್ಯಾವಲೋಕನ
  • ಮೂರನೇ ಸೋಮೇಶ್ವರ : ಮಾನಸೊಲ್ಲಾಸ
  • ನಾಗಚಂದ್ರ ಇವನನ್ನು ಅಭಿನವ ಪಂಪ ಎಂದು ಕರೆಯುತ್ತಾರೆ. ಮಲ್ಲಿನಾಥ ಪುರಾಣ, ರಾಮಚಂದ್ರ ಚರಿತ ಪುರಾಣ ಪ್ರಮುಖ ಕೃತಿಗಳು
  • ವಚನ ಸಾಹಿತ್ಯ ಆರಂಭವಾಗಿದ್ದು ಕಲ್ಯಾಣಿ ಚಾಲುಕ್ಯರ ಕಾಲದಲ್ಲಿ ಅಣ್ಣ ಬಸವಣ್ಣ, ಚೆನ್ನಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು, ಮಾದರ ಚೆನ್ನಯ್ಯ, ಅಂಬಿಗರ ಚೌಡಯ್ಯ, ಡೋಹರ ಕಕ್ಕಯ್ಯ ಮುಂತಾದ ಶಿವಶರಣರ ವಚನ ಸಾಹಿತ್ಯ ಆರಂಭವಾಗುತ್ತದೆ.

ಕಲೆ ಮತ್ತು ವಾಸ್ತುಶಿಲ್ಪ 

ಬಾದಾಮಿ ಚಾಲುಕ್ಯರ ಕಾಲದ ಶೈಲಿಯು ಇವರ ಕಾಲದಲ್ಲಿ ಅಭಿವೃದ್ಧಿಯನ್ನು ಹೊಂದಿದೆ. ಇವರು ನಿರ್ಮಿಸಿರುವ ದೇವಾಲಯಗಳ ಬಾಗಿಲು ಮುಂಭಾಗದ ಬದಲು ಪಕ್ಕದಲ್ಲಿರುವುದನ್ನು ಕಾಣಬಹುದು. ಇವರು ನಿರ್ಮಿಸಿರುವ ಪ್ರಮುಖ ದೇವಾಲಯಗಳು ಲಕ್ಕುಂಡಿಯ ವಿಶ್ವೇಶ್ವರ ದೇವಾಲಯ, ಇಟಗಿಯ ಮಹಾದೇವ ದೇವಾಲಯ (ದೇವಾಲಯಗಳ ಚಕ್ರವರ್ತಿ) ಇನ್ನು ಸೋಮೇಶ್ವರನ ಮಾನಸೊಲ್ಲಾಸ ಅಥವಾ ಅಭಿಲಾಷ ತೀರ್ಥ ಚಿಂತಾಮಣಿ ಪುಸ್ತಕದಲ್ಲಿ 12ನೇ ಶತಮಾನದ ಚಿತ್ರಕಲೆಯ ಬಗ್ಗೆ ವಿವರಣೆ ಇದೆ. 

ಹೊಯ್ಸಳರು

11ನೇ ಶತಮಾನದಲ್ಲಿ ಅಸ್ತಿತ್ವಕ್ಕೆ ಬಂದ ಹೊಯ್ಸಳರು ಸುಮಾರು 300 ವರ್ಷಗಳ ಕಾಲ ಕರ್ನಾಟಕವನ್ನು ಆಳಿದರು. ಇವರ ರಾಜಧಾನಿ ಹಾಸನ ಜಿಲ್ಲೆಯ ದ್ವಾರಸಮುದ್ರ ಮತ್ತು ಇವರ ಲಾಂಛನ ಹುಲಿಯನ್ನು ಕೊಲ್ಲುತ್ತಿರುವ ಸಳ ಈ ವಂಶದ ಸ್ಥಾಪಕ ನೃಪಕಾಮ ಸಳ ಹಾಗೂ ಪ್ರಮುಖ ಅರಸರು ವಿಷ್ಣುವರ್ಧನ ಮತ್ತು ಮೂರನೇ ಬಲ್ಲಾಳದೇವ. 

ಧರ್ಮ

ಇವರ ಕಾಲದಲ್ಲಿ ವೈಷ್ಣವ ಶೈವ ಜೈನ ಮತ್ತು ಬೌದ್ಧ ಧರ್ಮಗಳು ಪ್ರಚಲಿತದಲ್ಲಿ ಇದ್ದವು ಹಾಗೂ ಜೈನ ಧರ್ಮವು ಪ್ರಬಲವಾಗಿತ್ತು ಎಂದು ಹೇಳಲಾಗುತ್ತದೆ. ಇದಕ್ಕೆ ಪ್ರಮುಖ ಕಾರಣ ಹೊಯ್ಸಳರ ಸಾಮ್ರಾಜ್ಯದ ಸ್ಥಾಪನೆಗೆ ಕಾರಣರಾದ ಸುದತ್ತ ಮುನಿಗಳು, ಸಳ ಒಂದನೇ ಬಲ್ಲಾಳ ಜೈನ ಧರ್ಮದವರು.
ರಾಮಾನುಜಾಚಾರ್ಯರಿಗೆ ಹೊಯ್ಸಳರ ಪ್ರಸಿದ್ಧ ದೊರೆ ವಿಷ್ಣುವರ್ಧನ ಮೇಲುಕೋಟೆಯಲ್ಲಿ ಆಶ್ರಯವನ್ನು ನೀಡಿ ಯತಿರಾಜ ಮಠವನ್ನು ನಿರ್ಮಿಸಿಕೊಟ್ಟ. 

ಸಾಹಿತ್ಯ 

  • ಹರಿಹರನ : ಗಿರಿಜಾ ಕಲ್ಯಾಣ, ಶಿವಶರಣರ ರಗಳೆಗಳು, ರಕ್ಷಾ ಶತಕ,  ಪಂಪ ಶತಕ.
  • ರಾಘವಾಂಕ ಹರಿಶ್ಚಂದ್ರ ಕಾವ್ಯ, ವೀರೇಶ್ವರ, ಚರಿತ್ರೆ, ಶರಭ ಚರಿತ್ರೆ, ಸಿದ್ದರಾಮ ಪುರಾಣ.
  • ಹರಿಹರ ಮತ್ತು ರಾಘವಾಂಕ ಒಂದನೇ ನರಸಿಂಹನ ಆಸ್ಥಾನದಲ್ಲಿ ಇದ್ದರು
  • ಕೇಶಿರಾಜನ : ಶಬ್ದಮಣಿದರ್ಪನ ಇದು ಕನ್ನಡದ ಮೊದಲ ವ್ಯಾಕರಣ ದರ್ಪಣ (ಎರಡನೇ ನರಸಿಂಹನ ಆಸ್ಥಾನ)
  • ನೇಮಿಚಂದ್ರನ ನೇಮಿನಾಥ ಪುರಾಣ, ಲೀಲಾವತಿ 
  • ಜನ್ನ ಯಶೋಧರ ಚರಿತೆ (ಎರಡನೇ ಬಲ್ಲಾಳನ ಆಸ್ಥಾನ) 

ಕಲೆ ಮತ್ತು ವಾಸ್ತು ಶಿಲ್ಪ 

ಹೊಯ್ಸಳರು ನಕ್ಷತ್ರ ಆಕಾರದ ಜಗತಿಯ ಮೇಲೆ ನಿರ್ಮಿಸಲಾದ ದೇವಾಲಯಗಳು. ನಂತರ ನಕ್ಷತ್ರ ಆಕಾರದಲ್ಲಿ ಅವುಗಳ ಮೇಲೆ ಗೋಪುರ. ಹೊಯ್ಸಳರ ದೇವಾಲಯಗಳಲ್ಲಿ 5 ಗರ್ಭಗೃಹಗಳಿರುವ ಏಕಕೂಟ, ದ್ವಿಕೂಟ, ತ್ರಿಕೂಟ, ಚೌಕೂಟ, ಪಂಚಕೂಟ ಎಂಬ ಐದು ದೇವಾಲಯಗಳು ಇರುವುದನ್ನು ಕಾಣಬಹುದು. ಹೊಯ್ಸಳರು ತಮ್ಮ ವಾಸ್ತುಶಿಲ್ಪದ ಕಲೆಯಲ್ಲಿ ಬಳಪದ ಕಲ್ಲನ ಬಳಕೆ ಮಾಡಿದ್ದಾರೆ. ಇವರ ವಾಸ್ತುಶಿಲ್ಪದ ಶೈಲಿಯನ್ನು ಹೊಯ್ಸಳ ಶೈಲಿ ಅಥವಾ ವೇಸರ ಶೈಲಿ ಎಂದು ಕರೆಯುತ್ತಾರೆ.

ಪ್ರಮುಖ ದೇವಾಲಯಗಳು 

ಬೇಲೂರು ಚೆನ್ನಕೇಶವ ದೇವಾಲಯ 

ಈ ದೇವಾಲಯದ ಮುಖ್ಯ ಗರ್ಭ ಗೃಹ ಸುತ್ತಲೂ ಎರಡು ಮತ್ತು ಮೂರು ಶಿಖರಗಳಿಂದ ಕೂಡಿದ ಗರ್ಭಗುಡಿಗಳು ಒಟ್ಟಾಗಿವೆ. ವಿಶಾಲವಾದ ನಕ್ಷತ್ರ ಆಕಾರದ ಜಗತಿಯ ಮೇಲೆ ನಿರ್ಮಿಸಲಾದ ಈ ದೇವಾಲಯ ನಕ್ಷತ್ರಾಕಾರದಲ್ಲಿದೆ.

ಹೊಯ್ಸಳೇಶ್ವರ ದೇವಾಲಯ-ಹಳೇಬೀಡು 

ಈ ದೇವಾಲಯಗಳನ್ನು ಹೊಯ್ಸಳರ ದಂಡ ನಾಯಕ ಕೇತಮಲ್ಲ ನಿರ್ಮಿಸಿದ. ಈ ದೇವಾಲಯಗಳಲ್ಲಿ ಎರಡು ಗರ್ಭಗುಡಿಗಳು ಮತ್ತು ಎರಡು ನಂದಿ ಮಂಟಪಗಳಿವೆ. ಹೊಯ್ಸಳೇಶ್ವರ ದೇವಾಲಯದ ಕೆತ್ತನೆಯೂ ವಿಶ್ವಪ್ರಸಿದ್ಧವಾಗಿದೆ. 

ಕೇಶವ ದೇವಾಲಯ ಸೋಮನಾಥಪುರ 

ಈ ದೇವಾಲಯವು ತ್ರಿಕೂಟಾಚಲವಾಗಿದ್ದು ಇದನ್ನು 12ನೇ ಶತಮಾನದಲ್ಲಿ ಸೋಮದಂಡ ನಾಯಕ ಕಟ್ಟಿಸಿದ. ಮೂರು ಅಡಿ ನಕ್ಷತ್ರ ಆಕಾರದ ಜಗಲಿಯ ಮೇಲೆ ಪೂರ್ವಭಿಮುಖವಾಗಿ ಈ ದೇವಾಲಯವನ್ನು ನಿರ್ಮಿಸಲಾಗಿದೆ. ಮೂರು ಗರ್ಭಗೃಹಗಳು ಮತ್ತು ಅವುಗಳ ಮೇಲೆ ಮೂರು ಗೋಪುರಗಳನ್ನು ಒಳಗೊಂಡಿದೆ. 

ಹೊಯ್ಸಳರ ಲಲಿತ ಕಲೆ

ಹೊಯ್ಸಳರು ಕೇವಲ ಕಲೆ ಮತ್ತು ವಾಸ್ತು ಶಿಲ್ಪಕ್ಕೆ ಪ್ರಸಿದ್ಧಿ ಅಷ್ಟೇ ಅಲ್ಲದೆ ಸಂಗೀತ ಮತ್ತು ಚಿತ್ರಕಲೆಯಲ್ಲಿಯೂ ತಮ್ಮ ವೈಶಿಷ್ಟತೆಯನ್ನು ಸಾಧಿಸಿದ್ದಾರೆ. ಹೊಯ್ಸಳರ ಕಾಲದಲ್ಲಿ ರಾಣಿಯರು ನೃತ್ಯ ಪರಿಣಿತರಾಗಿದ್ದರು. ಹೊಯ್ಸಳರ ಕಾಲದ ರಾಣಿ ಶಾಂತಲೆ ಎನ್ನುವವರು ನೃತ್ಯವಿಶಾರದೆ ಎಂಬ ಬಿರುದನ್ನ ಪಡೆದಿದ್ದರು. ಪ್ರಮುಖವಾಗಿ ಹೊಯ್ಸಳರ ಕಾಲದ ಚಿತ್ರಕಲೆಗಳು ಜೈನ ಕೃತಿಗಳಲ್ಲಿ ಕಾಣಬಹುದೇ ಹೊರತು ದೇವಾಲಯಗಳಲ್ಲಿ ಕಂಡುಬರುವುದಿಲ್ಲ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು

Karnataka 540 Forest Guard Physical Date 2025